ಹೊನ್ನಾಪುರಮಠ, ಗದಿಗೆಯ್ಯ ಹುಚ್ಚಯ್ಯ
	1870-1933. ಉತ್ತರ ಕರ್ನಾಟಕ ಪ್ರದೇಶದಲ್ಲಿ ನಾಡುನುಡಿಗಳ ಜಾಗೃತಿಗಾಗಿ ಶ್ರಮಿಸಿದವರು; ಸಮಾಜಸೇವಕರು, ಪತ್ರಿಕೋದ್ಯಮಿ ಮತ್ತು ಲೇಖಕರು. ಧಾರವಾಡದವ ರಾದ ಇವರು ಅಲ್ಲಿಯೆ ಶಿಕ್ಷಣಪಡೆದು ವಕೀಲವೃತ್ತಿಯ ಜೊತೆಗೆ ಸಾರ್ವಜನಿಕ ಸೇವೆಯನ್ನು ನಡೆಸಿದರು. ಧಾರವಾಡ ಜಿಲ್ಲಾ ಮಂಡಳಿ ಮತ್ತು ನಗರ ಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ಅಖಿಲ ಭಾರತ ವೀರಶೈವ ಮಹಾ ಸಭೆಯ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ಇವರು, ಆ ಸಂಸ್ಥೆಯ ಕಾರ್ಯದರ್ಶಿಗಳಾಗಿಯೂ (1908) ಸ್ವಲ್ಪಕಾಲ ಕೆಲಸ ಮಾಡಿದರು. ಇವರು ವಾಗ್ದೇವಿ ಎಂಬ ಮಾಸಪತ್ರಿಕೆಯನ್ನು ಆರಂಭಿಸಿ ಸ್ವಲ್ಪಕಾಲ ನಡೆಸಿದರು. ಲೇಖಕರೂ ಆಗಿದ್ದ ಇವರು ಅದ್ಭುತಪ್ರೇಮ, ಅಲ್ಲಾವುದ್ದೀನ ಮತ್ತು ಒಂದು ಸೋಜಿಗದ ಕಥೆ ಎಂಬ ಕಥೆಗಳನ್ನೂ ಬಲ್ಲಾಳಚರಿತ್ರೆ, ಪ್ರಹ್ಲಾದಚರಿತ್ರೆ, ಸಾವಿತ್ರಿಚರಿತ್ರೆ ಎಂಬ ಜೀವನಚರಿತ್ರೆಗಳನ್ನೂ ಬಾಲಭಾಗವತ, ಬಾಲಭಾರತ, ಬಾಲರಾಮಾಯಣ ಎಂಬ ನಾಟಕಗಳನ್ನೂ ಬರೆದಿದ್ದಾರೆ. ಇವರು 1933 ಜನವರಿ 7 ರಂದು ನಿಧನರಾದರು.						
			*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ